ಜೀವನದಲ್ಲಿ ನಾವು ನಡೆಯುವ ದಾರಿಯೆಲ್ಲವೂ ಗುರಿಯ ಬೆನ್ನು ಹತ್ತಿ ಹೋಗುವ ಪಯಣಗಳೇ ಆಗಿರುತ್ತವೆ. ಅದೆಷ್ಟೋ ಸಲ ಇಂಥ ಮಾರ್ಗದಲ್ಲಿ ಗುರಿಯನ್ನು ತಲುಪುವುದೂ, ‘ಮಾಯಾಮೃಗ’ವನ್ನು ಹಿಡಿಯುವುದೂ ಎರಡೂ ಒಂದೇ ಅನಿಸುತ್ತದೆ. ಬಾಲ್ಯದಲ್ಲಿ ಆಟದ ಗುರಿ, ಯವ್ವನದಲ್ಲಿ ವೃತ್ತಿಯ ಗುರಿ, ನಂತರ ಮದುವೆ -ಸಂಸಾರದ ಗುರಿ, ಮುಪ್ಪಿನಲ್ಲಿ ಸುಖದ ಸಾವಿನ ಗುರಿ …. ಹೀಗೆ ಗುರಿಯ ಸುತ್ತಲೇ ಬದುಕು ಗಿರಕಿ ಹೊಡೆಯುತ್ತಿರುತ್ತದೆ.  ಅಂತೆಯೇ ನಮ್ಮ ವೃತ್ತಿಯಲ್ಲಿ ರೋಗಿಗೆ ಅನುಕೂಲವಾಗುವಂತೆ ನಿಖರ ವರದಿಗಳನ್ನು ಕೊಡುವುದು ನಮ್ಮ ಗುರಿ…. ಅದುವೇ ನಮ್ಮ ಕಾಯಕ. ಹೀಗೆ ‘ಸತ್ಯ ಶೋಧನೆ’ ಯ ಹೊತ್ತಿನಲ್ಲಿ ಅನೇಕ ಸವಾಲುಗಳನ್ನು, ಗೊಂದಲಗಳನ್ನು ಮತ್ತು  ಮಾನಸಿಕ ತೊಳಲಾಟವನ್ನು ಎದುರಿಸಬೇಕಾಗುವುದು ಅನಿವಾರ್ಯವಾಗುತ್ತದೆ. ತಪ್ಪು ವರದಿಗಳ ಸಲುವಾಗಿ  ಕೆಲವೊಮ್ಮೆ ಕೋರ್ಟು -ಕಛೇರಿ ಅಲೆದಾಟವೂ ಬಂದೊದಗಬಹುದು.

ನಮ್ಮ ವೃತ್ತಿ ಜೀವನದಲ್ಲಿ ಪ್ರತಿನಿತ್ಯ  ಜಾರುಗಾಜುಗಳ  ಮೇಲೆ ಭಿತ್ತಿಗೊಂಡಿರುವ ಅನೇಕ  ಅಂಗಾಂಶಗಳನ್ನು ಕೂಲಂಕುಶವಾಗಿ ಪರೀಕ್ಷಿಸುತ್ತೇವೆ. ರೋಗಿಯ ಪ್ರಾಥಮಿಕ ಆರೋಗ್ಯ ಸಮಸ್ಯೆಗಳು, ಅವನನ್ನು ಪರೀಕ್ಷಿಸಿದಾಗ ಚಿಕಿತ್ಸಕರು ಕಂಡುಹಿಡಿದ ಅಸಾಮಾನ್ಯ ಸಂಗತಿಗಳು, ಸಂಬಂಧಪಟ್ಟ ಪ್ರಯೋಗಾಲಯ ಪರೀಕ್ಷಾ ವರದಿಗಳು , ಕೆಲವೊಮ್ಮೆ ಅಂಗಾಂಶಗಳ ಬಾಹ್ಯ ಗೋಚರಿಕೆ ಹೀಗೆ ಹಲವಾರು ಅಂಶಗಳನ್ನು ಪರಿಗಣಿಸಿ, ತುಲನಾತ್ಮಕವಾಗಿ ಆಲೋಚಿಸಿ, ರೋಗ ನಿರ್ಣಯ ಮಾಡುತ್ತೇವೆ. ಎಷ್ಟೋ ಸಂದರ್ಭಗಳಲ್ಲಿ ಅನೇಕ ಪುಸ್ತಕಗಳ ಪುಟಗಳನ್ನು ತಿರುವಿ ಹಾಕಿ, ಜಾಲತಾಣಗಳಲ್ಲಿನ ಮಾಹಿತಿ ಸಂಗ್ರಹಿಸಿ, ಹತ್ತು ಹಲವಾರು ವಿಷಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ರೋಗ ನಿರ್ಧಾರ ಮಾಡಲಾಗುತ್ತದೆ.

ಪ್ರಯೋಗಾಲಯದಲ್ಲಿ ‘ರೋಗ ನಿರ್ಣಯ’ ಮಾಡುವ ಹಂತದಲ್ಲಿ ಅನೇಕ ಅನಿರೀಕ್ಷಿತ ತಿರುವುಗಳು, ಕಲ್ಲು ಮುಳ್ಳಿನ ದಾರಿಗಳು, ಏರು ತಗ್ಗುಗಳು, ಪರ-ವಿರೋಧ ಚರ್ಚೆ ಗಳನ್ನೂ ಎದುರಿಸಿ, ಅತ್ಯಂತ  ಸೂಕ್ತವೆನಿಸುವ ವರದಿ ನೀಡಲಾಗುತ್ತದೆ. ಪ್ರತೀ ಪರೀಕ್ಷೆಯ ವರದಿಯಲ್ಲಿ ರೋಗನಿರ್ಣಯ ಶಾಸ್ತ್ರಜ್ಞನ  ‘ಸಹಿ ‘ಹಾಕುವ ಕೆಲಸ ಬಾಹ್ಯ ಪ್ರಪಂಚಕ್ಕೆ ಸರಳವಾಗಿ ಕಂಡರೂ, ಆ ಕಾರ್ಯಕ್ಷಮತೆಗೆ ಬೇಕಾಗುವ ಆಳವಾದ  ಜ್ಞಾನ ಸಾಗರದಷ್ಟೇ ವಿಸ್ತಾರ. ಗೊಂದಲದ ಗೂಡುಗಳಿಂದ, ‘ಸರಿ-ತಪ್ಪು’ಗಳ ತೂಗುಯ್ಯಾಲೆಯ ತೊಳಲಾಟದಿಂದ  ಅತೀ ಜಾಣ್ಮೆಯಿಂದ ಹೊರಬಂದು, ನಿಖರ ಪರೀಕ್ಷಾ ವರದಿಯ ಮೂಲಕ ರೋಗಿಯ ಭವಿಷ್ಯ ನಿರ್ಧಾರ ಮಾಡುವ ದೊಡ್ಡ ಜವಾಬ್ದಾರಿಯನ್ನು ಪ್ರತಿಯೊಬ್ಬ  ರೋಗಲಕ್ಷಣ ಶಾಸ್ತ್ರಜ್ಞ ಹೊತ್ತಿರುತ್ತಾನೆ.

ನಿರ್ಜೀವ ಜೀವಕೋಶಗಳನ್ನು, ವಿವಿಧ ಅಂಗಾಂಶಗಳನ್ನು  ಜಾರುಗಾಜುಗಳ ಮೇಲೆ ಭಿತ್ತಿಸಿ, ಬಣ್ಣಗಳ ಮಾಯಾಲೋಕದಲ್ಲಿ ಅವುಗಳನ್ನು ಮೀಯಿಸಿ, ನಂತರ  ಅರಿವೆಂಬ ಬೆಳಕಿನೆದುರು ತಂದು ನಿಲ್ಲಿಸಿ, ಅಕ್ಷಿಪಟಲಗಳ ಮೇಲೆ ಅವುಗಳ ಸಂಪೂರ್ಣ ರೂಪುರೇಷೆಗಳನ್ನು ಅನಾವರಣಗೊಳಿಸಿಕೊಂಡು ರೋಗ ನಿರ್ಣಯ ಮಾಡಲಾಗುತ್ತದೆ. ಒಬ್ಬರೋಗಿಯ ಸರಿಯಾದ ಚಿಕಿತ್ಸೆ ಆತನನ್ನು ಪ್ರತ್ಯಕ್ಷವಾಗಿ ಪರೀಕ್ಷಿಸುವ ಚಿಕಿತ್ಸಕನ ಪಾತ್ರವಷ್ಟೇ ಅವಲಂಬಿಸಿರದೇ, ರೋಗಿಯನ್ನು ಪರೋಕ್ಷವಾಗಿ  ನೋಡುವ ರೋಗನಿರ್ಣಯ ಶಾಸ್ತ್ರಜ್ಞನ ನಿಖರ ವರದಿಯ ಮೇಲೆ  ನಿರ್ಧರಿತವಾಗುತ್ತದೆ. ಸರಿಯಾದ ಪ್ರಯೋಗಾಲಯ ಪರೀಕ್ಷಾ ವರದಿ ನೀಡಲು ಉನ್ನತ ಪರೀಕ್ಷೆಗಳಾದ ಮೊಲಿಕ್ಯುಲರ್ ಟೆಸ್ಟ್ಸ್ , ವಂಶವಾಹಿ ಪರೀಕ್ಷೆ ಮೊದಲಾದುವುಗಳನ್ನು ಮಾಡಿಸಬೇಕಾಗುತ್ತದೆ. ಎಷ್ಟೆಲ್ಲಾ ಪರೀಕ್ಷೆಗಳ ನಂತರವೂ ಕೆಲವೊಂದು ಕಾಯಿಲೆಗಳ ನಿಖರ ಪತ್ತೆಯಲ್ಲಿ ‘ ಬಂದ  ದಾರಿಗೆ ಸುಂಕವಿಲ್ಲ ‘ ಎಂಬಂತೆ ಅಸಹಾಯಕ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಖಾಯಿಲೆಯ ನಿಖರ ಪತ್ತೆಯಲ್ಲಿ ಎಡವಲು ಅನೇಕ ಕಾರಣಗಳಿವೆ. ಬಹು ಮುಖ್ಯ ಕಾರಣಗಳೆಂದರೆ ರೋಗಿಯ ಸಂಪೂರ್ಣ ವಿವರದ ಅಲಭ್ಯತೆ, ಸಂಬಂಧಿತ ಪ್ರಯೋಗ ಪರೀಕ್ಷೆಯ ವರದಿಗಳ ಕೊರತೆ, ಪರೀಕ್ಷಾ ತಜ್ಞರ ಅನುಭವದ ಕೊರತೆ, ಜೊತೆಗೆ ಉನ್ನತ ಪರೀಕ್ಷೆಗಳನ್ನು ಮಾಡಿಸಲು ಆರ್ಥಿಕತೆಯ ಅಡಚಣೆ. ಇಂಥ ಸಮಸ್ಯೆಗಳೆಲ್ಲ ಒಂದೆಡೆಯಾದರೆ , ಮಾರಕ ರೋಗಗಳಾದ ಕ್ಯಾನ್ಸರ್ ಗಂಟುಗಳ ಜೀವಕೋಶಗಳು ಒಂದೇ ರೀತಿಯ ಅರೇಂಜ್ಮೆಂಟ್ ನಿಂದ ಗೋಚರಿಸಿದಾಗ, ಅಂತ ಗಂಟುಗಳ ಸರಿಯಾದ ನಾಮಕರಣ ಉನ್ನತ ಪರೀಕ್ಷೆಗಳ ನೆರವಿರದೆ ಹೋದರೆ ಕಷ್ಟ ಸಾಧ್ಯ . ಈ ನಿಟ್ಟಿನಲ್ಲಿ ‘ಬೆಳ್ಳಗಿರುವುದೆಲ್ಲ ಹಾಲಲ್ಲ’  ಎಂಬ ಸತ್ಯ ನಮ್ಮ ನಿಜ   ಜೀವನದಲ್ಲೂ ಅನ್ವಯಿಸುತ್ತದೆ.  ಇಂಥ ಅದೆಷ್ಟೋ ಉದಾಹರಣೆಗಳು ನಮ್ಮ ವೃತ್ತಿ ಜೀವನದಲ್ಲಿ ಸಂಭವಿಸುತ್ತಿರುತ್ತವೆ. ವರ್ಷದ ಹಿಂದೆ ನಡೆದ ಇಂಥ ಒಂದು ಸಂದರ್ಭವನ್ನು ಒಂದು ಕಥೆಯ ಮೂಲಕ ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.

ಮಧ್ಯಾಹ್ನ ಊಟದ ವಿರಾಮದ ನಂತರ ‘ ಜೀವಕೋಶ ಶಾಸ್ತ್ರ ‘ ಎಂದರೆ ಸೈಟೊಲೊಜಿ ವಿಭಾಗದಲ್ಲಿ ಸೂಕ್ಷ್ಮ ಸೂಜಿ ಪರೀಕ್ಷೆಗೆ ಒಳಪಡಿಸಿದ ಕೆಲವು  ರೋಗಿಗಳಿಗೆ ಸಂಬಂಧಪಟ್ಟ ಜಾರು ಗಾಜುಗಳನ್ನು ಪರೀಕ್ಷಿಸುವುದರಲ್ಲಿ ಮಗ್ನರಾಗಿದ್ದೆವು. ಕೆಲವರು ವರದಿಗಳನ್ನು ತಯಾರು ಮಾಡುತ್ತಿದ್ದರು. ಮತ್ತೆ ಕೆಲವರು ಸೂಕ್ಷ್ಮ ದರ್ಶಕದ ಮೂಲಕ ಗೋಚರಿಸಿದ ಮಾಹಿತಿಯ ಟಿಪ್ಪಣಿಯನ್ನು ತಯಾರಿಸುತ್ತಿದ್ದರು. ಹೀಗೆ ನೋಡುತ್ತಿರುವಾಗ ಕೆಲವೊಂದು ಜಾರುಗಾಜುಗಳು ಅರವತ್ತರ ಆಸುಪಾಸಿನ ವಯೋವೃಧ್ಧನ ಮೀಡಿಯಾಸ್ಟಿನಂ ಎಂಬ  ಜಾಗದಲ್ಲಿನ ದೊಡ್ಡ ಗಂಟಿನಿಂದ ದೊರೆತ ‘ಜೀವ ದ್ರವ’ ದಿಂದ ತಯಾರಿಸಲ್ಪಟ್ಟಿತ್ತು. ಎಲ್ಲಾ ಜಾರುಗಾಜುಗಳನ್ನು ಸೂಕ್ಶ್ಮವಾಗಿ ಪರೀಕ್ಷಿಸಿ ಅದು ಕ್ಯಾನ್ಸರ್ ಗಂಟು ಇರಬಹುದೆಂಬ ಸಂಶಯ ಬರತೊಡಗಿತು. ಆದರೆ ಯಾವ ಗಂಟು ಎಂದು ನಿಖರವಾಗಿ ತಿಳಿಯದಾಯಿತು.

ಕೆಲವರು ಕ್ಯಾನ್ಸರ್ ಗಂಟು ಎಂದು ನಾಮಕರಣ ಮಾಡಿದರೆ, ಮತ್ತೆ ಕೆಲವರು ಕ್ಯಾನ್ಸರ್ ಗಂಟು ಅಲ್ಲ ಎಂದು ವಾದಿಸತೊಡಗಿದರು. ಶ್ವಾನೋಮ , ಸೋಲಿಟರಿ ಫೈಬ್ರಸ್ ಟ್ಯೂಮರ್ , ಥಾಯ್ಮೊಮಾ ಹೀಗೆ ಇವುಗಳಲ್ಲಿ ಒಂದು ಬಗೆಯ ಗಂಟು ಇರಬಹುದು ಎನಿಸಿತು. ಮರುದಿನ ಸೆಲ್ ಬ್ಲಾಕ್ ತಯಾರಿಸಿ ಅದನ್ನು ಪರೀಕ್ಷಿಸಲಾಯಿತು. ಅದರಲ್ಲಿ ಜೀವಕೋಶಗಳು ರಕ್ತನಾಳಗಳ ಸುತ್ತ ಗೋಚರಿಸಿತು. ಇದನ್ನು ನಾವು ‘ಪೇರಿಥೆಲಿಯೋಮಾಟಸ್ ‘ ಪ್ಯಾಟರ್ನ್ ಎಂದು ಕರೆದವು. ನಂತರ ಸೋಲಿಟರಿ ಫೈಬ್ರಸ್ ಟ್ಯೂಮರ್ ಎಂಬ ವರದಿಯನ್ನು ನೀಡಲಾಯಿತು. ಕೆಲ ದಿನಗಳ ನಂತರ ಅದೇ ಸೆಲ್ ಬ್ಲಾಕ್ ಮೇಲೆ ಇಮ್ಮುನೊಹಿಸ್ಟೊಕೆಮಿಸ್ಟ್ರಿ ಎಂಬ ಉನ್ನತ ಪರೀಕ್ಷೆ ಮಾಡಿಸಲಾಯಿತು. ಈಗ ನಮಗೊಂದು ವಿಸ್ಮಯ ಕಾದಿತ್ತು. ಈ ಪರೀಕ್ಷೆಯ ನಂತರ ಆ ಗಂಟು ಸೈನೋವಿಯಲ್ ಸಾರ್ಕೋಮಾ ಎಂಬ ಅಪರೂಪದ ಕ್ಯಾನ್ಸರ್ ಎಂದು ಅಂತೂ ಇಂತೂ ತಿಳಿಯಿತು. ಕೆಲ ದಿನಗಳ ನಂತರ ಚಿಕಿತ್ಸೆಗೆ ರೋಗಿಯು ಸ್ಪಂದಿಸಲಾಗದೆ ಮರಣಿಸಿದ ಎಂದು ತಿಳಿಯಿತು.

ಹೀಗೆ ಅನೇಕ ಬಾರಿ ‘ಪ್ರತ್ಯಕ್ಷ ನೋಡಿದರು ಪ್ರಮಾಣಿಸಿ ನೋಡು ‘ ಎಂಬ ಮಾತು ನಮ್ಮ ವೃತ್ತಿ ಜೀವನದಲ್ಲಿ ನೂರಕ್ಕೆ ನೂರರಷ್ಟು ಸತ್ಯವಾದ ಮಾತು, ಅಲ್ಲವೇ?  ನಮ್ಮ ಜೀವನದ ಪ್ರತಿ ಕೌತುಕ ಕ್ಷಣಗಳನ್ನು ಆನಂದಿಸಿ , ಅನುಭವಿಸಿ, ಒಂದು ಹೊಸ  ಪಾಠ ಕಲಿತು, ಸಾಧ್ಯವಾದಷ್ಟು ಮಟ್ಟಿಗೆ  ರೋಗಿಗೆ ಸೂಕ್ತ, ನಿಖರ , ಅನುಕೂಲಕರ  ವರದಿ ಸಲ್ಲಿಸುವುದೇ ನಮ್ಮ ವೃತ್ತಿ ಧರ್ಮ ಅಲ್ಲವೇ?